ಕನ್ನಡ:
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನಗಳ ಮಾತೃಭಾಷೆ ಕನ್ನಡವಾಗಿದೆ. ಕದಂಬ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.
ಭಾಷಿಕ ಚರಿತ್ರೆ:
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;
೧. ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ, ೨. ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು ೩. ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.
ನಿಘಂಟು:
ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವೊಂದನ್ನೂ ರಚಿಸಿದ್ದಾರೆ.